ಬರ್ಮುಡ ದ್ವೀಪಗಳು -
	ಉತ್ತರ ಅಟ್ಲಾಂಟಿಕ್ ಸಾಗರದ ಪಶ್ಚಿಮದಲ್ಲಿರುವ ಹವಳ ದ್ವೀಪಸ್ತೋಮ. ಅಮೆರಿಕ ಸಂಯುಕ್ತಸಂಸ್ಥಾನದ ಉತ್ತರ ಕರಲೀನ ರಾಜ್ಯದ ಹ್ಯಾಟರಾಸ್ ಭೂಶಿರದ ಆಗ್ನೇಯಕ್ಕೆ 916 ಕಿಮೀ ದೂರದಲ್ಲೂ ನ್ಯೂಯಾರ್ಕ್ ನಗರದಿಂದ 1080 ಕಿಮೀ ದೂರದಲ್ಲೂ ಇರುವ ಈ ದ್ವೀಪಸ್ತೋಮ ಬ್ರಿಟಿಷರ ಸ್ವಯಮಾಡಳಿತ ವಸಾಹತು. ಉ.ಅ. 32ಲಿ 20' ಪ.ರೇ. 65ಲಿ 45' ನಲ್ಲಿರುವ ಈ ದ್ವೀಪಸ್ತೋಮ ನೋವಾಸ್ಕೋಸಿಯ ಮತ್ತು ವೆಸ್ಟ್ ಇಂಡೀಸ್ ದ್ವೀಪಗಳ ನಡುಮಾರ್ಗದಲ್ಲಿದೆ. ಮೀನಿನ ಗಾಳದಾಕಾರದಲ್ಲಿ ಸುಮಾರು 40 ಕಿಮೀ ಉದ್ದಕ್ಕೂ ಸುಮಾರು 300 ಚಿಕ್ಕ ಚಿಕ್ಕ ದ್ವೀಪಗಳು ಹರಡಿಕೊಂಡಿವೆ. ಇವುಗಳ ಪೈಕಿ 20 ದ್ವೀಪಗಳಲ್ಲಿ ಜನವಸತಿ ಇದೆ. ಸೆಂಟ್ ಡೇವಿಡ್, ಸೆಂಟ್ ಜಾರ್ಜ್ ಬೋಅಜ್, ಐರ್ಲೆಂಡ್, ಸಾಮರ್ಸೆಟ್ ವಾಟ್‍ಪೋರ್ ಮತ್ತು ಬರ್ಮುಡ ದೊಡ್ಡ ದ್ವೀಪಗಳು. ಹಿಂದೆ ಲಾಂಗ್ ಐಲೆಂಡ್ ಎಂಬ ಹೆಸರಿದ್ದ ಮುಖ್ಯ ದ್ವೀಪ. ಬರ್ಮುಡ ಸುಮಾರು 39 ಚ.ಕಿಮೀ ವಿಸ್ತಾರ ಇದೆ. ಮುಖ್ಯವಾದ ಏಳು ದ್ವೀಪಗಳಿಗೂ ಸೇತುವೆಗಳ ಮೂಲಕ ಸಂಪರ್ಕ ಕಲ್ಪಿಸಿದೆ. ಒಟ್ಟು ದ್ವೀಪಗಳ ವಿಸ್ತೀರ್ಣ 53 ಚ. ಕಿಮೀ ಜನಸಂಖ್ಯೆ 63,000 (2001). ಇದರ ಜೊತೆಗೆ 15,000 ಮಂದಿ ಬ್ರಿಟನ್ ಅಮೆರಿಕ ಸೈನಿಕರಿದ್ದಾರೆ. ರಾಜಧಾನಿ ಹ್ಯಾಮಿಲ್ಟನ್ ಮುಖ್ಯ ದ್ವೀಪ ಬರ್ಮುಡದಲ್ಲಿದೆ.

	ಈ ದ್ವೀಪಗಳಲ್ಲಿ ವಿವಿಧ ಬುಡಕಟ್ಟಿನವರಿದ್ದು, 1970ರ ಜನಗಣತಿಯಂತೆ ನಿಗ್ರೋಗಳ ಸಂಖ್ಯೆ ಶೇಕಡಾ 59ರಷ್ಟಿದ್ದು ಉಳಿದವರು ಪೋರ್ಜುಗಲ್, ಸ್ಪೇನ್, ಇಂಗ್ಲೆಂಡ್ ಮೊದಲಾದ ದೇಶಗಳಿಂದ ಬಂದು ನೆಲೆಸಿದವರು. ಮುಖ್ಯ ನಗರಗಳಲ್ಲಿ ವಿದ್ಯುತ್ ದೂರವಾಣಿ ಮುಂತಾದ ಸೌಲಭ್ಯವಿದೆ. ಪ್ರಾಥಮಿಕ ವಿದ್ಯಾಭ್ಯಾಸದ ವೆಚ್ಚವೆಲ್ಲ ಸರ್ಕಾರದ್ದು. 7ರಿಂದ 13 ವರ್ಷದ ಮಕ್ಕಳಿಗೆಲ್ಲ ಕಡ್ಡಾಯ ವಿದ್ಯಾಭ್ಯಾಸವುಂಟು, ಪ್ರಥಮ, ಮಾಧ್ಯಮಿಕ ಮತ್ತು ವೃತ್ತಿ ಶಿಕ್ಷಣ ಶಾಲೆಗಳಿವೆ. 1626ರಲ್ಲಿ ಸ್ಥಾಪಿತವಾದ ವಾರ್ವಿಕ್ ಸ್ಕೂಲ್ ಇದೆ. 1619ರ ಸೆಂಟ್ ಪೀಟರ್‍ನ ಇಗರ್ಜಿ ಕೆಲವು ಐತಿಹಾಸಿಕ ಕಟ್ಟಡಗಳು ಮತ್ತು ಅನೇಕ ಗುಹೆಗಳು ಈ ದ್ವೀಪಗಳಿವೆ. ಬರ್ಮುಡ ದ್ವೀಪಗಳ ಮುಖ್ಯ ಅರ್ಥಿಕ ಚಟುವಟಿಕೆ ಅದರ ಪ್ರವಾಸೋದ್ಯಮವನ್ನವಲಂಬಿಸಿದೆ. ಈ ದ್ವೀಪಗಳಿಗೆ ಪ್ರತಿವರ್ಷ ಲಕ್ಷಕ್ಕೂ ಮೀರಿ ಪ್ರವಾಸಿಗಳು ಬರುತ್ತಾರೆ. ಇದರಿಂದಾಗಿ ಹೋಟಲ್ ಉದ್ಯಮ ಮತ್ತು ಅದಕ್ಕೆ ಪೂರಕವಾದ ಉದ್ಯಮಗಳು ಅಭಿವೃದ್ಧಿಯಾಗಿವೆ. ಇಲ್ಲಿಂದ ನ್ಯೂಯಾರ್ಕ್, ಕೆನಡ, ಲಂಡನ್ ಮತ್ತು ವೆಸ್ಟ್ ಇಂಡೀಸ್‍ಗಳಿಗೆ ವಿಮಾನ ಸಂಪರ್ಕವಿದೆ. ನ್ಯೂಯಾರ್ಕ್‍ನಿಂದ ಮೂರುಗಂಟೆಗಳ ಕಾಲದಲ್ಲಿ ವಿಮಾನಗಳು ಈ ದ್ವೀಪಗಳನ್ನು ಮುಟ್ಟುತ್ತವೆ.			
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ